Friday, December 26, 2008

ಕಾಡು ಹರಟೆ
ಕಾಡು, ಝರಿ, ನೆನಪುಗಳು, ಬೆಟ್ಟ, ಬೆಳದಿಂಗಳು, ಕತೆ, ಸುಸ್ತು, ಚಾರಣ, ಜೋಶ್... confusion, decision, friends... ಹೀಗೆ ಇನ್ನೂ ಅನೇಕ ವಿಷಯಗಳು ಇಣುಕೋ ತಾಣ.
Friday, 26 December, 2008

ಮುಕ್ತಿ ಹೊಳೆ
ತುಂಬಾ ದಿನಗಳಿಂದ ಬ್ರಹ್ಮಗಿರಿಗೆ ಹೋಗಬೇಕು ಅನ್ಕೊಂಡಿದ್ವಿ. ಈ ಸಾರಿ 15 ದಿನ ಮುಂಚಿತವಾಗಿ ಬ್ರಹ್ಮಗಿರಿಗೆ ಹೊಗೊ ವ್ಯವಸ್ತೆ ಮಾಡಿಕೊಂಡು ತಯಾರಾಗಿದ್ದೆವು. ಆದರೆ ಹೊರಡೋ 3 ದಿನಗಳ ಮೊದಲು ಬ್ರಹ್ಮಗಿರಿಗೆ ಫೋನಾಯಿಸಿದಾಗ "ಸಾರ್ ನೀವು ಮತ್ತೆ ಫೊನ್ ಮಾಡಲಿಲ್ಲವಲ್ಲ ಅದುಕ್ಕೆ ಬೇರೆಯವರಿಗೆ ಬುಕ್ಕಿಂಗ್ ಮಾಡಿದ್ದೀವಿ. ನೀವು ಮುಂದಿನ ವಾರ ಬನ್ನಿ" ಎಂದು ನಿರಾಯಸವಾಗಿ ಹೇಳಿ ನಮ್ಮ ಉತ್ಸಾಹಕ್ಕೆ ಕಲ್ಲೇಟು ಹಾಕಿದ್ದ ಅಲ್ಲಿನ ಅರಣ್ಯಾಧಿಕಾರಿ.ಬರಗಾಲದಲ್ಲಿ ಅಧಿಕ ಮಾಸ - ನಾವು ಮೊದಲೇ 3 ತಿಂಗಳಿಂದ ಎಲ್ಲೂ ಹೊಗಿಲ್ಲ, ಹಾಗಾಗಿ ಈ ಮಾಸ್ಟರ್ ಪ್ಲಾನ್ ಹಾಕ್ಕಿದ್ರೆ ಇದೂ ಉಲ್ಟಾ ಹೊಡಿತಲಪ್ಪ. ಮುಂದೇನು ಅಂತ ಜಗದೀಶ ಮತ್ತು ಲವ್ಸ್ಯೂ ರಾಘವೇಂದ್ರನಿಗೆ ಫೋನ್ ಮಾಡಿ ನವೆಂಬರ್ 15-16 ತಾರಿಖು ಬಹಳ ಮುಂಚೆನೇ ಗೊತ್ತು ಮಾಡಿರೊದ್ರಿಂದ ಬೇರೆ ಎಲ್ಲಾದರೂ ಹೋಗೋಣ ಎಂದೆ. ಜಗದೀಶ ಮುಕ್ತಿ ಹೊಳೆಗೆ ಈ ಮುಂಚೆ ಒಂದು ಸಾರಿ ಹೊಗಿದ್ದರಿಂದ ಅಲ್ಲಿಗೆ ಹೋಗೋ ನಿರ್ಧಾರ ಮಾಡಿದೆವು.ಆ ಬ್ಲಾಗು ಈ ಬ್ಲಾಗು ಓದಿ ಮುಕ್ತಿ ಹೊಳೆ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಎಲ್ಲಾ ಬ್ಲಾಗುಗಳಲ್ಲೂ, ದಾರಿ ಸಿಗದೆ ಕಳೆದು ಹೊಗೋ ಸಾಧ್ಯತೆಗಳು ಇದೆ ಸ್ವಲ್ಪ ಹುಷಾರು ಎಂದು ಎಚ್ಚರಿಸಿದ್ದರು. ಬ್ಲಾಗ್ ಬರೆದವರೆಲ್ಲಾ ಅಲ್ಲಿ ಉಳಿದುಕೊಳ್ಳೊಕೆ ಮಹದೇವ ನಾಯಕರ ಮನೆಗೆ ಹೊಗಿದ್ದರು. ಜಗದೀಶನೂ ಮುಕ್ತಿಹೊಳೆಗೆ ಹೋದಾಗ ಅಲ್ಲೇ ಉಳಿದಿದ್ದ ಆದರೆ ಅವರ ಫೋನ್ ನಂಬರ್ ಎಲ್ಲೂ ಸಿಗಲಿಲ್ಲ. ಹಾಗಾಗಿ ಮುಕ್ತಿಹೊಳೆ ಹೋಗುವ ಮೊದಲು ಮಹದೇವ ನಾಯಕರಿಗೆ ಫೋನಾಯಿಸಿ ನಮಗೆ ಗೈಡ್ ವ್ಯವಸ್ತೆ ಮಾಡಿಕೊಳ್ಳಲಾಗಿರಲಿಲ್ಲ. ಆರು ಜನ ಹೊರಡೋದು ಅಂತ ನಿರ್ಧಾರ ಆಗಿತ್ತು ಆದರೆ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಇನ್ನೂ 3 ಮೂರು ಜನ ಸೇರಿಕೊಂಡು ಒಂಬತ್ತು ಜನರಾದೆವು.ನಾವು ಗೊತ್ತು ಮಾಡಿದ್ದ ಟೆಂಪೋ ಟ್ರಾವೆಲ್ಲರಿನಲ್ಲಿ ಬೆಂಗಳೂರು ಬಿಟ್ಟಾಗ ರಾತ್ರಿ 11 ಗಂಟೆ. ಮುಕ್ತಿಹೊಳೆ ಹೊನ್ನಾವರದ ಹತ್ತಿರ ಇದೆ. ಬೆಂಗಳೂರಿನಿಂದ ಹೊನ್ನಾವರ ಸುಮಾರು 450 ಕೀ.ಮೀ. ಮುಕ್ತಿಹೊಳೆ ತಲುಪಲು ಬೆಂಗಳೂರು ಹೊನ್ನಾವರ ರಸ್ತೆಯಲ್ಲಿ (B H Road NH-206) ಹೊನ್ನಾವರದ ಹತ್ತಿರ ಇರುವ ಹಡಿನಬಾಳದಿಂದ ಬಲಕ್ಕೆ ತಿರುಗಬೇಕು. ಮೊದಲು ಗುಂಡಬಾಳ ಎನ್ನುವ ಊರು ಸಿಗುತ್ತದೆ. ಹಡಿನಬಾಳದಿಂದ ಸುಮಾರು 15 ಕೀ.ಮೀ. ದೂರದಲ್ಲಿ ಹಿರೇಬೈಲು ಎಂಬುವ ಊರಿದೆ. ಮಹದೇವ ನಾಯಕರ ಮನೆ ಇರುವುದು ಇಲ್ಲೇ. ಊರು ಅಂದಾಕ್ಷಣ ಬಯಲುಸೀಮೆಯ ಕಡೆಯ ಊರುಗಳನ್ನ ಕಲ್ಪಿಸಿಕೊಳ್ಳ ಬೇಡಿ. ಹಿರ್‍ಏಬೈಲಿನಲ್ಲಿ ನಮಗೆ ಕಾಣಿಸಿದ್ದು ಒಂದೇ ಮನೆ. ಹಿರೇಬೈಲು ತಲುಪಲು KSRTC ಬಸ್ಸುಗಳೂ ಇವೆ. ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಹಡಿನಬಾಳದಿಂದ ಒಂದು ಬಸ್ಸು ಹಿರೇಬೈಲಿಗೆ ಬರುತ್ತದೆ. ಮಳೆ ಇಲ್ಲದಿದ್ದರೆ ಮಾತ್ರ ಬಸ್ಸು ಹಿರೇಬೈಲಿಗೆ ಬರುತ್ತದೆ ಇಲ್ಲದಿದ್ದರೆ ಇಲ್ಲ. ಹಡಿನಬಾಳದಿಂದ ಹಿರೇಬೈಲಿಗೆ 15 ಕೀ.ಮೀ. ದಾರಿ ಸವೆಸಲು ನಮಗೆ ಒಂದು ಗಂಟೆಯೇ ಹಿಡಿಯಿತು. ನಾವು ಹಡಿನಬಾಳದಲ್ಲಿ ತಿಂಡಿ ತಿಂದು, ಅದಕ್ಕೂ ಮುಂಚೆ ಗೇರುಸೊಪ್ಪ ಜಲಪಾತದ ತಪ್ಪಲಿನಲ್ಲಿ ನಿತ್ಯಕರ್ಮಗಳನ್ನು ಮುಗಿಸಿ ಬಂದಿದ್ದೆವು. ನಾವುಗಳು ಈ ಕಾರಣಕ್ಕಾಗಿ ಗೇರುಸೊಪ್ಪಕೆ ಹೋಗಿದ್ದು ಇದು ಮೂರನೇ ಬಾರಿ.ಮಚ್ಚೆ ಎಲ್ಲಿದೆ!? ತಂಡ ಮಹದೇವ ನಾಯಕರ ಮನೆ ತಲುಪಿದಾಗ ಬೆಳಗ್ಗೆ ಹನ್ನೊಂದು ಗಂಟೆಗಳಾಗಿದ್ದವು. ಮಹದೇವ ನಾಯಕರು ಹಾಗು ಅವರ ಮಗ ಮನೆಯಲ್ಲಿಯೇ ಇದ್ದರು. ನಾವು ಹೀಗೆ ಮುಕ್ತಿ ಹೊಳೆ ನೋಡಲು ಬಂದಿರುವುದಾಗಿ ತಿಳಿಸಿ, ಯಾರದರು ನಮಗೆ ಗೈಡ್ ಸಿಗುತ್ತಾರೆಯೇ ಎಂದು ವಿಚಾರಿಸಿದೆವು. ಮುಂಚಿತವಾಗಿ ತಿಳಿಸಿ ಬಂದಿದ್ದರೆ ವ್ಯವಸ್ತೆ ಮಾಡಬಹುದಿತ್ತು ಆದರೆ ಈಗ ಕಷ್ಟ ಎಂದರು. ನಮ್ಮ ಜಗದೀಶ ಈ ಮೊದಲು ಮುಕ್ತಿಹೊಳೆಗೆ ಹೋಗಿ ಬಂದಿದ್ದರಿಂದ ನಮಗೆ ಸ್ವಲ್ಪ ದಾರಿ ಹೇಳಿ ನಾವುಗಳೇ ಹೊಗುತ್ತೇವೆ ಎಂದೆವು. ಮಹದೇವ ನಾಯಕರು ಮತ್ತು ಅವರ ಮಗ ಮೊದಲು ಅನುಮಾನಿಸಿದರೂ ನಂತರ ಒಪ್ಪಿದರು. ಮುಕ್ತಿಹೊಳೆಗೆ ಹೋಗಲು ಮಹದೇವ ನಾಯಕರ ಮನೆಯಿಂದ ಹೊರಟು ಎದುರಿಗಿರುವ ಗುಡ್ಡದಲ್ಲಿ ಏರು ಮುಖವಾಗಿ ಹೋಗಬೇಕು. ನಂತರ ಒಂದು ಜಾಗದಲ್ಲಿ ಬಲಕ್ಕೆ ತಿರುಗಿ ಗುದ್ದಡ ಇನ್ನೊಂದು ಬದಿಗೆ ಇಳಿಯಬೇಕು. ಈ ಬಲತಿರುವನ್ನು ಗುರುತಿಸುವುದೇ ಅತ್ಯಂತ ಕಷ್ಟ. ಅಲ್ಲಿ ಯಾವುದೇ ದಾರಿ ಸೂಚಕಗಳಿಲ್ಲ. ಮುಂಚಿತವಾಗಿ ನೋಡಿದ್ದರೂ ಈ ತಿರುವನ್ನು ಗುರುತಿಸುವುದು ಕಷ್ಟವೇ. ಈ ಗುಡ್ಡವನ್ನು ಇಳಿದರೆ ಸಿಗುವ ಕಣಿವೆಯಲ್ಲಿ ಮುಕ್ತಿಹೊಳೆ ಹರಿಯುತ್ತದೆ. ಅಲ್ಲಿಂದ ಸುಮಾರು ಒಂದು ಗಂಟೆಗೂ ಮೀರಿ ನೀರಿನ ಹರಿವಿನ ವಿರುದ್ದವಾಗಿ ನೆಡೆದರೆ ಮುಕ್ತಿಹೊಳೆ ಜಲಪಾತ ಸಿಗುತ್ತದೆ.ನಾವು ಮಹದೇವ ನಾಯಕರ ಮನೆ ಬಿಟ್ಟಾಗ ಸುಮಾರು 11.30. ಮಹದೇವ ನಾಯಕರ ಮನೆಯ ಹತ್ತಿರದಿಂದ ಹೊರಡುವ ಕಾಲು ದಾರಿಯಲ್ಲಿ ಹೊರಟೆವು. ಸುಮಾರು ಅರ್ಧ ಗಂಟೆಗೂ ಮೀರಿ ನೆಡೆದರೂ ನಾವುಗಳು ಬೆಟ್ಟವನ್ನು ಏರದೇ ಅದನ್ನು ಬಳಸಿ ಬರುತ್ತಿದ್ದೇವೆ ಅನ್ನಿಸುತಿತ್ತು. ದಾರಿಯಲ್ಲಿ ನಮಗೆ ಒಂದು ಮನೆ ಕಾಣಿಸಿತು. ಒಂದಿಬ್ಬರು ಒಳಗೆ ಹೋಗಿ ಮುಕ್ತಿಹೊಳೆಯ ದಾರಿ ಕೇಳಿಕೊಂಡು ಬಂದರು. ಬೆಟ್ಟದ ಮೇಲಕ್ಕೆ ಹತ್ತುವ ದಾರಿಯನ್ನು ನಾವುಗಳು ಈ ಹಿಂದೆಯೇ ಬಿಟ್ಟು ಬಂದಿರುವೆವು ಮತ್ತು ನಮ್ಮ ಎದುರಿಗಿರುವ ಏರು ರಸ್ತೆಯಲ್ಲಿ ಹೋದರೆ ದಾರಿ ಮುಂದೆ ಒಂದು ಕಡೆ ಕವಲಾಗುತ್ತದೆ ಅಲ್ಲಿ ಬಲಕ್ಕೆ ಹೋದರೆ ಮಹದೇವ ನಾಯಕರ ಮನೆಯಿಂದ ಮುಕ್ತಿಹೊಳೆಗೆ ಹೋಗುವ ಕಾಲು ದಾರಿ ಕೋಡಿಕೊಳ್ಳುತ್ತೇವೆ ಎಂದು ಆ ಮನೆಯಲ್ಲಿದ್ದವರು ತಿಳಿಸಿದ್ದರು. ನಾವು ನೆಡೆದ ಅರ್ಧ ಗಂಟೆಯ ದಾರಿಯು ಒಣಗಿದ ತರಗೆಲೆಗಳಿಂದ ಕೂಡಿತ್ತು. ನವೆಂಬರಿನ ಒಣಹವೆ ಎದ್ದು ಕಾಣುತಿತ್ತು. ಆದರೂ ನನಗೆ ಒಂದೆರೆದು ಜಿಗಣೆಗಳು ಅಮರಿಕೊಂಡಿದ್ದವು. ಒಂದು ಜಿಗಣೆಯಂತು ಕಾಲು ಬೆರಳಿನ ಸಂದಿಯಲ್ಲಿ ಕೂತು ಚೆನ್ನಾಗಿಯೇ ರಕ್ತ ಕುಡಿದಿತ್ತು. ಜಿಗಣೆಗಳು ಚಂದ್ರನಿಗೂ ಕಚ್ಚಿದ್ದವು. ನಾವಿಬ್ಬರು ಜಿಗಣೆಗಳನ್ನು ಕೀಳುವುದನ್ನು ಕಂಡು ಉಳಿದವರೂ ಒಮ್ಮೆ ತಮ್ಮ ಕೈ ಕಾಲುಗಳನ್ನು ನೋಡಿಕೊಂಡರು. ಇಲ್ಲಿಂದ ಮುಂದೆ ಏರು ರಸ್ತೆಯಲ್ಲಿ ಒಂದೇ ಸಮನೆ ನೆಡೆಯತೊಡಗಿದೆವು. ಒಂದುಕಡೆ ದಾರಿ ಕವಲಾಯಿತು. ನಾವು ಬಲಗಡೆಗೆ ಹೊರಳಿಕೊಂಡೆವು. ಈ ದಾರಿ ಮುಂದೆ ಹೋಗಿ ಇನ್ನೊಂದು ಕಲ್ದಾರಿಯನ್ನು ಸೇರಿಕೊಂಡಿತು- ಇದೇ ಮಹದೇವ ನಾಯಕರ ಮನೆಯ ಕಡೆಯಿಂದ ಬರುವ ದಾರಿ. ಹೀಗೆ ಏರು ದಾರಿಯಲ್ಲಿ ಒಂದು ಗಂಟೆ ನೆಡೆದಮೇಲೆ ನಾವು ಬೆಟ್ಟದ ತುದಿ ತಲುಪಿದ್ದೇವೆ ಅನ್ನಿಸತೊಡಗಿತು. ಇಲ್ಲಿಂದ ಮುಂದೆ ದಾರಿ ಸಣ್ಣದಾಗಿ ಇಳಿಯತೊಡಗಿದಾಗ ಬಲಕ್ಕೆ ಕಣಿವೆಯ ಕಡೆಗೆ ಇಳಿಯುವ ಕಾಲುದಾರಿಯನ್ನು ಹುಡುಕುತ್ತ ಮುಂದೆ ನೆಡೆದೆವು. ಒಂದು ಕಡೆ ಮರದ ಬಡ್ಡೆಯೊಂದಕ್ಕೆ ಮಚ್ಚಿನಿಂದ ಹೊಡೆದು ಗುರುತು ಮಾಡಲಾಗಿತ್ತು. ಇದೇ ಕಣಿವೆಗೆ ಇಳಿಯುವ ದಾರಿಯೆಂದು ಜಗದೀಶ ಹೇಳಿದ. ನಾವು ಗಮನಕೊಟ್ಟು ಹುಡುಕಿಕೊಂಡು ಬರದಿದ್ದಲ್ಲಿ ಈ ಕಾಲ್ದಾರಿಯನ್ನು ಗುರುತಿಸಲು ಸಾಧ್ಯವೇ ಇರಲಿಲ್ಲ. ಈ ಕಾಲ್ದಾರಿಯನ್ನು ಗುರುತಿಸದೆ ಮುಂದೆ ಆರೇಳು ಕೀಲೋ ಮೀಟರಿನಷ್ಟು ಮುಂದೆ ನೆಡೆದರೆ ಕೋಡಿಗದ್ದೆಯೆಂಬ ಊರು ಸಿಗುತ್ತದೆ. ಅಲ್ಲಿಂದ ಸಿದ್ದಾಪುರ-ಕುಮಟ ರಸ್ತೆಯನ್ನು ಸೇರಬಹುದು. ಗುಡ್ಡವನ್ನು ಏರುತ್ತಿದ್ದಂತೆ ಕಾಡು ದಟ್ಟವಾಗತೊಡಗಿತ್ತು. ಈಗ ನಾವುಗಳು ಇಳಿಯುತ್ತಿದ್ದ ದಾರಿಯಂತೂ ಬಹಳ ಕಡಿದಾಗಿದ್ದು ಜಾರುತಿತ್ತು. ಇಲ್ಲಿ ಸೂರ್ಯನ ಬೆಳಕು ನೆಲಮುಟ್ಟುವುದು ಕಷ್ಟವೆನ್ನಿಸುವಷ್ಟು ಕಾಡು ದಟ್ಟವಾಗಿತ್ತು. ಇಲ್ಲಿ ಹೆಚ್ಚಾಗಿ ರಬ್ಬರ್ ಮರಗಳು ಕಂಡವು. ಈ ದಾರಿಯಲ್ಲಿ ಜನ ತಿರುಗಾಡದ ಕಾರಣ ಬಹಳ ಗಿಡ ಬಳ್ಳಿಗಳು ದಾರಿಗೆ ಅಡ್ಡವಾಗಿ ಬೆಳೆದಿದ್ದವು. ಎಲ್ಲೂ ನಿಲ್ಲದೆ ಸತತವಾಗಿ ಅರ್ಧಗಂಟೆ ಇಳಿದಮೇಲೆ ನಾವು ಕಣಿವೆಯನ್ನು ಸೇರಿದೆವು. ಮಹದೇವ ನಾಯಕರ ಮನೆಯಿಂದ ಹೊರಟು ಕಣಿವೆ ಸೇರಲು ನಮಗೆ ಸುಮಾರು ಎರಡು ಗಂಟೆಗಳೇ ಹಿಡಿದಿದ್ದವು. ಕೆಲಕಾಲ ಹರಿಯುತ್ತಿದ್ದ ನೀರಿನಲ್ಲಿ ಕಾಲು ಮುಳುಗಿಸಿಕೊಂಡು ಕೂತೆವು. ಸಮಯ ಆಗಲೇ ಮಧ್ಯಾಹ್ನ 1.30 ಆಗಿತ್ತು. ಮಹದೇವ ನಾಯಕರು ಕಣಿವೆಗೆ ಇಳಿದಮೇಲೆ ಜಲಪಾತ ತಲುಪತು ಸುಮಾರು ಒಂದು ಗಂಟೆಯಷ್ಟು ನೆಡೆಯಬೇಕು ಎಂದಿದ್ದರು. ನಾವು ಹೋಗುತ್ತಿದ್ದ ಗತಿಯಲ್ಲಿ ನಮಗೆ ಕನಿಷ್ಟ ಒಂದೂವರೆ ಗಂಟೆಗಳಾದರೂ ಬೇಕಿತ್ತು. 3 ಗಂಟೆಗೆ ಸರಿಯಾಗಿ ಜಲಪಾತ ತಲುಪಿದರೂ ಮತ್ತೆ ವಾಪಸ್ಸು ಮಹದೇವ ನಾಯಕರ ಮನೆ ತಲುಪಲು ನಾಲ್ಕು ಗಂಟೆಗಳೇ ಬೇಕು ಎಂಬುದು ನಮ್ಮ ಲೆಕ್ಕಾಚಾರವಾಗಿತ್ತು. ತಿನ್ನಲು ಬೇಕಾದ್ದನ್ನು ಬಿಟ್ಟು ಉಳಿದೆಲ್ಲಾ ಸಾಮಗ್ರಿಗಳನ್ನು ಗಾಡಿಯಲ್ಲಿಯೇ ಬಿಟ್ಟು ಬಂದಿದ್ದರಿಂದ, ನಾವುಗಳು ಯಾವುದೇ ಕಾರಣಕ್ಕೂ ಕಾಡಿನಲ್ಲಿ ರಾತ್ರಿ ಕಳೆಯುವ ಸ್ಥಿತಿಯಲ್ಲಿ ಇರಲಿಲ್ಲ.ಅಲ್ಲೊಂದು ಇಲ್ಲೊಂದು ಫೋಟೊಗಳನ್ನು ತೆಗೆಯುತ್ತಿದ್ದರೂ ಸರಸರನೆ ಹೆಜ್ಜೆಹಾಕತೊಡಗಿದೆವು. ದಾರಿಯಲ್ಲಿ ಬಹಳಷ್ಟು ಹಾವಿನ ಪೊರೆಗಳು ನೋಡಲು ಸಿಕ್ಕಿದವು. ಹರೀಶ ಮತ್ತು ಗಿರೀಶರ ನಕ್ಷತ್ರ ಚೆನ್ನಗಿದ್ದಿದ್ದರಿಂದ ಅವರಿಗೆ ಜೀವಂತ ಹಾವೆ ಕಾಣಿಸಿತು. ಮಳೆಗಾಲ ಮುಗಿದಿದ್ದರಿಂದ ನೀರಿನ ಹರಿವು ಕಡಿಮೆಯಾಗಿತ್ತು. ಈ ಹೊಳೆಯಲ್ಲಿ ಬಹಳ ರಭಸದಿಂದ ನೀರು ಹರಿಯುವುದರಿಂದ ದಡಗಳಲ್ಲಾಗಲಿ ಇಲ್ಲವೆ ಹೊಳೆಯಲ್ಲಾಗಲಿ ಸ್ವಲ್ಪವೂ ಮಣ್ಣು ಇರದೆ ಶುಭ್ರವಾಗಿದೆ. ಹೊಳೆಯ ದಡದಲ್ಲಿ ಬರೀ ಬಂಡೆಗಳೇ ಇವೆ. ಒಂದು ಬಂಡೆಯಿಂದ ಇನ್ನೋಂದು ಬಂಡೆಗೆ ನೆಗೆಯುತ್ತಾ, ಎಡ ದಂಡೆಯಲ್ಲಿ ಮುಂದೆ ಹೋಗಲು ಸಾಧ್ಯವೆ ಇಲ್ಲ ಎಂದಾಗ ಹೊಳೆದಾಟಿ ಬಲ ದಂಡೆಗೆ ಹೋಗಿ ಅಲ್ಲಿಂದ ಮುಂದೆ ನೆಡೆಯ ತೊಡಗಿದೆವು. ಹೀಗೆ ಎಡದಂಡೆಯಿಂದ ಬಲದಂಡೆಗೆ ಮತ್ತು ಬಲದಿಂದ ಎಡಕ್ಕೆ ದಾಟಿಕೊಳ್ಳುತ್ತಾ ಮುಂದುವರೆದೆವು. ಒಂದೇ ಒಂದು ಮಳೆ ಬಂದರೂ ಇಲ್ಲಿ ನೆಡೆಯುವುದು ದುಸ್ತರ. ಹೊಳೆಬಿಟ್ಟು ಸ್ವಲ್ಪ ಮೇಲೆ ಹತ್ತಿದರೂ ಜೀವ ತಿನ್ನುವಷ್ಟು ಜಿಗಣೆಗಳಿರುತ್ತವೆ. ಮಳೆಗಾಲದಲ್ಲಿ ಈ ಜಾಗಕ್ಕೆ ಬರುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗುವುದಿಲ್ಲ. ಈ ಮುಂಚೆ ಜಗದೀಶ ಏಪ್ರಿಲ್ ತಿಂಗಳಿನಲ್ಲಿ ಇಲ್ಲಿಗೆ ಬಂದಿದ್ದಾಗ ಒಂದೇ ಒಂದು ಅಡ್ಡಮಳೆ ಹೊಡೆದಿದ್ದರಿಂದ ಈ ಕಣಿವೆಯವರೆಗೆ ಬಂದು ಇಲ್ಲಿಂದ ಮುಂದೆ ಹೋಗಲಾರದೆ ಹಿಂತಿರುಗಿದ್ದರು. pic: GPS ನಿಂದ ಹಿಡಿದ ಚಾರಣದ ಜಾಡುಈಗಾಗಲೆ ಹೊಳೆಯ ದಡದಲ್ಲಿ ಒಂದು ಗಂಟೆ ಸತತವಾಗಿ ನೆಡೆದಿದ್ದರೂ ಜಲಪಾತದ ಸುಳಿವು ಸಿಕ್ಕಿರಲಿಲ್ಲ. ನಮ್ಮ ಲವ್ಸ್ಯೂ ’ಋಷಿ ಮೂಲ ನದಿ ಮೂಲ ಹುಡುಕಬಾರದು ಅದುಕ್ಕೆ ನಮಗೆ ಈ ಜಲಪಾತ ಸಿಗ್ತಿಲ್ಲ ಮೂರು ಗಂಟೆ ಒಳಗೆ ಇದು ಸಿಕ್ಕಲಿಲ್ಲಂದ್ರೆ ವಾಪಸ್ ಹೊಗೋಣ’ ಎಂದ. ಚಂದ್ರ, ಜಗದೀಶ, ಗಿರೀಶ ಎಲ್ಲರಿಗಿಂತ ಮುಂದಿದ್ದರೆ... ನಾನು ಹರೀಶ ಮತ್ತು ಲವ್ಸೂ ರಾಘವೇಂದ್ರವೇಂದ್ರ ಮಧ್ಯದಲ್ಲಿ ಇದ್ದೆವು. ವರುಣ್ ಸುಸ್ತಾಗಿದ್ದ ಅವನ ಗತಿ ಇಳಿದಿತ್ತು ಅವನ ಜೊತೆಗೆ ರಂಗ ಇದ್ದ. ಸಮಯ 3 ಗಂಟೆಯಾಗಿತ್ತು, ಹೊಳೆ ಬಹಳ ತಿರುವುವುಗಳನ್ನ ತಗೊಂಡಿತ್ತು... ಎದುರಿಗೆ ಕಾಣುತ್ತಿರುವ ತಿರುವೇ ಕೊನೆಯದು ಜಲಪಾತ ಸಿಗದಿದ್ದರೆ ವಾಪಸ್ ಹೊರಡೋಣ ಅಂದುಕೊಂಡು ಆ ತಿರುವು ದಾಟಿದರೆ ಅಲ್ಲೇ ಇತ್ತು ಮುಕ್ತಿ ಹೊಳೆ ಜಲಪಾತ. ಮುಕ್ತಿಹೊಳೆ ಜಲಪಾತ ಮೂರು ಹಂತದಲ್ಲಿ ಕೆಳಗಿಳಿಯುತ್ತದೆ. ಮೊದಲನೆಯದು ಚೆನ್ನಾಗಿ ಕಾಣುತ್ತದೆ, ಎರಡನೆಯದು ಅಷ್ಟು ಚೆನ್ನಾಗಿ ಕಾಣುವುದಿಲ್ಲ. ಕೊನೆಯ ಮತ್ತು ಮೂರನೆಯ ಹಂತವೇ ಉಳಿದವುಗಳಿಗಿಂತ ಜೋರಾಗಿ ಬೀಳುತ್ತದೆ. ಮುಕ್ತಿಹೊಳೆ ಜಲಪಾತದಿಂದ ಧುಮುಕುತಿದ್ದ ನೀರು ಹಾಲಿನಷ್ಟು ಶುಭ್ರವಾಗಿ ಕಾಣುತಿತ್ತು. ನೀರು ಧುಮುಕಿ ಕೆಳಗೆ ಒಂದು ಸಣ್ಣ ಹೊಂಡ ನಿರ್ಮಾಣವಾಗಿದೆ.ಸ್ವಲ್ಪ ಹೊತ್ತು ಕೂತು ಜಲಪಾತವನ್ನು ನೋಡಿದೆವು. ಕೆಲವರು ಬಟ್ಟೆ ಕಳಚಿ ನೀರಿಗೆ ಇಳಿದರು. ಉಳಿದವರು ಊಟಕ್ಕ ಕೈ ಹಚ್ಚಿದರು. ಬೆಂಗಳೂರಿನಿಂದ ತಂದಿದ್ದ ಚಪಾತಿ, ಹೊಳಿಗೆ, ಚಕ್ಕುಲಿ, ಕೋಡುಬಳೆಗಳ ಸೇವನೆ ಆಯಿತು. ಸಮಯ ಆಗಲೆ ನಾಲ್ಕು ಗಂಟೆಯ ಸಮೀಪ ಬಂದಿದ್ದರಿಂದ ಹೊರಡಲು ತಯಾರಾದೆವು. ಸುಮಾರು ನಾಲ್ಕು ಗಂಟೆಗಳಷ್ಟು ಕಾಲ ನೆಡೆದು ಬಂದಿದ್ದರೂ ಜಲಪಾತದ ಬಳಿ ಹೆಚ್ಚು ಸಮಯ ಕಳೆಯಲಾಗದಿದ್ದುದ್ದಕ್ಕೆ ಎಲ್ಲರಿಗೂ ಬೆಜಾರಿತ್ತು. ಮರಳಿ ಮಹದೇವ ನಾಯಕರ ಮನೆ ತಲುಪಲು ಮತ್ತೆ ಸುಮಾರು ನಾಲ್ಕು ಗಂಟೆಗಳಷ್ಟು ನೆಡೆಯಬೇಕು ಎನ್ನುವುದು ಎಲ್ಲರಿಗೂ ತಿಳಿದಿತ್ತು. ಕಣಿವೆಯಿಂದ ಬೆಟ್ಟದ ತುದಿಗೆ ಹತ್ತಬೇಕಿದ್ದ ಏರಿನ ಬಗ್ಗೆ ಎಲ್ಲರಿಗೂ ಹೆದರಿಕೆ ಇತ್ತು. ಕತ್ತಲಾಗುವುದಕ್ಕೆ ಮುಂಚೆ ಈ ಏರುದಾರಿಯನ್ನು ದಾಟಬೇಕೆಂದುಕೊಂಡಿದ್ದೆವು. ನಾನು, ಚಂದ್ರ, ರಾಘವೇಂದ್ರ ಹಾಗೂ ಗಿರೀಶ ಸರಸರನೇ ಹೆಜ್ಜೆ ಹಾಕತೊಡಗಿದೆವು. ಲವ್ಸೂ ರಾಘವೇಂದ್ರ ’ವೆಂಕು ಪೆಣಂಬೂರಿಗೆ’ ಹೋದ ಹಾಗೆ ತಲೆ ಬಗ್ಗಿಸಿಕೊಂಡು ಮುಂದೆ ಹೋಗುತಿದ್ದ. ಹೋಗುವಾಗ ಒಂದೂವರೆ ಗಂಟೆ ತೆಗೆದುಕೊಂಡಿದ್ದ ದಾರಿಯನ್ನು ಒಂದು ಗಂಟೆಯಲ್ಲಿ ಪೂರೈಸಿದೆವು. 5 ಗಂಟೆಯ ಹೊತ್ತಿಗೆ ನಾವು ಬೆಟ್ಟದಿಂದ ಇಳಿದು ನದಿ ದಡ ಸೇರಿದ್ದ ಜಾಗ ತಲುಪಿದೆವು. ಇಳಿಯುವಾಗಲೆ ಮತ್ತೆ ಗುರುತಿಸಲು ಸುಲಭವಾಗುವಂತೆ ನೀರಿನ ಬಾಟಲಿಗಳನ್ನು ಕಟ್ಟಿದ್ದೆವು. ಹೀಗೆ ಕಟ್ಟಿದ್ದು ಬಹಳ ಸಹಾಯ ಆಯಿತು. ಅವುಗಳಿಲ್ಲದಿದ್ದರೆ ಮತ್ತೆ ಮೇಲೆ ಹತ್ತುವ ದಾರಿ ಗುರುತು ಹಿಡಿಯುವುದು ಕಷ್ಟವಿತ್ತು.ಹಿಂದಿದ್ದ ಗುಂಪಿನಲ್ಲಿ ವರುಣ್ ಬಹಳ ಸುಸ್ತಾಗಿದ್ದ. ಅವರು ನಮ್ಮನ್ನು ಬಂದು ಸೇರುವ ಹೊತ್ತಿಗೆ 5.30 ಆಗಿತ್ತು. ನೇತುಹಾಕಿದ್ದ ಬಾಟಲಿಗಳನ್ನು ಬಿಚ್ಚಿಕೊಂಡು ನೀರು ತುಂಬಿಸಿಕೊಂಡೆವು. ಇಲ್ಲಿಯವರೆಗೆ ನದಿಯದಂಡೆಯಲ್ಲಿಯೇ ನೆಡೆಯುತ್ತಿರುವುದರಿಂದ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೊಗುವ ಅಗತ್ಯ ಇರಲಿಲ್ಲ. ಸಂಜೆಗತ್ತಲು ಆವರಿಸುತಿತ್ತು ಪೂರ್ತಿ ಕತ್ತಲಾಗುವ ಹೊತ್ತಿಗೆ ಬೆಟ್ಟದ ತುದಿ ತಲುಪಬೇಕಿತ್ತು. ಇಲ್ಲಿಂದ ಮುಂದೆ ತಂಡ ಹೊಡೆದು ಹೋಗದೆ ಒಟ್ಟಿಗೆ ನೆಡೆಯತೊಡಗಿದೆವು. UP ಜಾಸ್ತಿ ಇದ್ದಿದ್ದರಿಂದ ಕೆಲ ಹೆಜ್ಜೆ ಇಟ್ಟೊಡನೆ ಸುಸ್ತಾಗಿ ನಿಂತೆವು. ಏರು ದಾರಿಯಲ್ಲಿ ಸ್ವಲ್ಪ ದೂರ ನೆಡೆಯುವುದು ನಿಲ್ಲುವುದು ಮಾಡುತ್ತಾ ನೆಡೆಯತೊಡಗಿದೆವು. ಅಂದುಕೊಂಡಂತೆ ಪೂರ್ತಿ ಕತ್ತಲಾಗುವದೊರೊಳಗೆ ಮೇಲೆ ಹತ್ತಿದ್ದೆವು. ಇಲ್ಲಿಂದ ಮುಂದೆ ಇಳಿಜಾರು. ಟಾರ್ಚ್ ಗಳನ್ನು ಹೊತ್ತಿಸಿಕೊಂಡು ನೆಡೆಯತೊಡಗಿದೆವು. ಸತತವಾಗಿ ಒಂದೂವರೆಗಂಟೆ ನೆಡೆದ ಮೇಲೆ ಸುಮಾರು ಎಂಟುಗಂಟೆಯ ಸುಮಾರಿಗೆ ಮಹದೇವ ನಾಯಕರ ಮನೆ ತಲುಪಿದೆವು.ವರುಣನ ಕಾಲಿಗೆ ಬಹಳಷ್ಟು ಜಿಗಣೆಗಳು ಹತ್ತಿದ್ದವು. ಅವನು ಎಷ್ಟು ಸುಸ್ತಾಗಿದ್ದನೆಂದರೆ ಕೈ ಹಾಕಿ ಜಿಗಣೆಗಳನ್ನೂ ಕಿತ್ತು ಕೊಂಡಿರಲಿಲ್ಲ. ಉಳಿದವರೂ ಜಿಗಣೆಗಳನ್ನು ಹುಡುಕಿ ಕಿತ್ತುಕೊಂಡೆವು. ಮಹದೇವ ನಾಯಕರ ಮನೆಯ ಬಳಿಯೇ ಒಂದು ಸಣ್ಣ ಕಾಲುವೆ ಇದೆ. ಅಲ್ಲಿಗೆ ಹೋಗಿ ಕೈ ಕಾಲು ತೊಳೆದುಕೊಂಡು ಬಂದು ಜಗುಲಿಯಲ್ಲಿ ಕೂತೆವು. ಮುಕ್ತಿ ಹೊಳೆಗೆ ಹೋಗುವ ಮೊದಲೆ ರಾತ್ರಿ ಊಟಕ್ಕೆ ಮಹದೇವ ನಾಯಕ ಮನೆಯಲ್ಲಿ ಹೇಳಿ ಹೋಗಿದ್ದೆವು. ಬಿಸಿ ಬಿಸಿ ಅನ್ನ, ತೆಂಗಿನ ಕಾಯಿನ ಚಟ್ನಿ ಜೊತೆಗೆ ಮಜ್ಜಿಗೆ ಹುಳಿ ಬೆರೆಸಿಕೊಂಡು ಎರಡು ಪಾತ್ರೆ ಅನ್ನ ಮುಗಿಸಿದೆವು. ಆವರ ಮನೆಯ ಜಗುಲಿಯಲ್ಲಿ ರಾತ್ರಿ ಮಲಗಿದ್ದು ಬೆಳಗೆದ್ದು ಅವರು ಕೊಟ್ಟ ಚಹ ಕುಡಿದು ಅವರ ಸಹಾಯಕ್ಕೆ ವಂದಿಸಿ ಹೊನ್ನಾವರದ ಕಡೆಗೆ ಹೊರಟೆವು.ಹೊನ್ನಾವರದಲ್ಲಿ ತಿಂಡಿ ತಿಂದು ಶರಾವತಿ ಹಿನ್ನೀರಿನಲ್ಲಿ ದೋಣಿ ವಿಹಾರಕ್ಕೆ ಹೊರಟೆವು. ಒಂದು ’ಡಿಂಗಿ’ ಬಾಡಿಗೆಗೆ ಹಿಡಿದು ಸುಮಾರು ಎರಡು ಗಂಟೆಗಳಕಾಲ ಸುತ್ತಿದೆವು. ನಾನು, ರಾಘವೇಂದ್ರ ಮತ್ತು ದೋಣಿ ಚಲಾಯಿಸುವುದನ್ನೂ ಒಂದು ಕೈ ನೋಡಿದೆವು. ಅಲ್ಲಿಂದ ಅಪ್ಸರ ಕೊಂಡಕ್ಕೆ ಹೋಗಿ ಬೀಚಿನಲ್ಲಿ ಆಟವಾಡಿ ಕೊಂಡದಲ್ಲಿ ಮಿಂದು ಊಟಕ್ಕೆ ಹೊರಟೆವು. ಕಾಮತ ಹೋಟೆಲಿನಲ್ಲಿ ಊಟ ಮುಗಿಸಿ 4 ಗಂಟೆ ಸುಮಾರಿಗೆ ಬೆಂಗಳೂರಿನ ದಾರಿ ಹಿಡಿದೆವು.

ಕುಂಟಿನಿ pages
ಕುಂಟಿನಿ ಎಂಬುವವರು ಬ್ಲಾಗಿಸಿರೊ ಕವನಗಳನ್ನ ಓದಿದೆ... ತುಂಬಾ ಮುದಕೊಟ್ಟವು. ನಾನು ಓದಿ ನಿಮಗೂ ತೋರಿಸ ಬೇಕು ಅನ್ನಿಸ್ತು, ಒಂದೇ ಒಂದು ಚುಟುಕವನ್ನ (ಅವರ ಅನುಮತಿಗೂ ಕಾಯದೆ) ಈಗ ಇಲ್ಲಿ ಹಾಕ್ಕಿದ್ದೀನಿ, ಓದಿ.ನಿತ್ಯ ಮುಂಜಾನೆ ಹಕ್ಕಿಯ ಕಲರವದಲ್ಲಿ ನಿನ್ನಸಂತೋಷಕ್ಕಿಂತಅದರ ಪಾಡಿದೆ.ಎಷ್ಟು ಚೆನ್ನಾಗಿದೆ ಅಲ್ಲವೇ? ನನ್ನಂತ ಮಂದ ಮತಿಗೇ ಅರ್ಥ ಹೊಳೆದಿರುವಾಗ ನಿಮಗೆ ತಿಳಿಯೊಲ್ಲವೇ... ಉಳಿದವನ್ನ ಓದೊದಕ್ಕೆ ಅವರ ಬ್ಲಾಗಿಗೆ ಭೇಟಿಕೊಡಿ.

Beach Trek
2008 ಜನವರಿ 19, 20ನೇ ತಾರಿಖಿನಂದು ನಾವು ಹೊನ್ನಾವರದಿಂದ ಗೋಕರ್ಣದವರೆಗೆ ಸಮುದ್ರದಂಡೆ ಚಾರಣ (Beach Trek) ಕೈಗೊಂಡ್ವಿ. ಕರ್ನಾಟಕದ ಕೊಂಕಣ ಬಹಳ ಸುಂದರ. ಅರಬ್ಬೀ ಸಮುದ್ರದ ದಂಡೆಯಲ್ಲಿ ನೆಡೆಯುತ್ತ ಅದರ ಸವಿಯನ್ನು ಅನುಭವಿಸಬೇಕು ಎನ್ನುವುದೇ ನಮ್ಮ ಉದ್ದೇಶವಾಗಿತ್ತು.ಕೆಲವೊಂದು ಚಾರಣಗಳು ಸತಾಯಿಸ್ತವೆ, ಕಾಯಿಸ್ತವೆ. ಎಷ್ಟೋ ದಿನಗಳಿಂದ ತಯಾರಿ ಮಾಡಿಕೊಂಡಿದ್ರೂ ಹೊರಡೋ ಮುಂಚೆ ಏನೋ ವಿಘ್ನ ಕಾದಿರುತ್ತೆ. ಆದರೆ ಈ ಚಾರಣದ ಬಗ್ಗೆ ಕಾರ್ಥಿಕ್ ಕಳಿಸಿದ ವರದಿ ಓದಿದ ತಕ್ಷಣ ಇಲ್ಲಿಗೆ ಹೊಗೊ ತಾರಿಖು ಪಕ್ಕ ಮಾಡಿದ್ವಿ. ೧೫ ಜನ ತುಂಬಾ ಉತ್ಸಾಹದಿಂದ ನಾವು ಬರ್ತಿವಿ ಅಂತಂದ್ರು. ನಿಶ್ಚಯಿಸಿದ ದಿನಕ್ಕೂ ಹೊರಡೋ ದಿನಕ್ಕೂ 2 ವಾರ ಗ್ಯಾಪ್ ಇತ್ತು. ಅಷ್ಟರಲ್ಲಿ ಬೇರೆ ಬೇರೆ ಕಾರಣಕ್ಕೋಸ್ಕರ ನಾಲ್ಕು ಜನ ಕೆರೆ-ದಡ ಅನ್ನೋತರ ಬರ್ತಿವಿ, ಬರಬಹುದು, ಒಂಬತ್ತು ಗಂಟೆಗೆ ಹೇಳ್ತಿನಿ ಅನ್ನೋ ಹಂಗೆ ಆದ್ರು. ಇಬ್ಬರು ಹೊಸ ಸದಸ್ಯರ ಜೊತೆಗೆ ಕೊನೆಗೆ ಹೊರಟ ತಲೆಗಳು 13. ಪ್ರತಿ ಸಾರಿ KSRTC ಬಸ್ಸಲ್ಲೇ ಹೋಗುತ್ತಿದ್ದ "ಮಚ್ಚೆ ಎಲ್ಲಿದೆ!?" ತಂಡ ಈ ಸಾರಿ ಟೆಂಪೋ ಟ್ರಾವೆಲ್ಲರ್ ಬಾಡಿಗೆಗೆ ತಗೊಂಡು ಹೊರಟಿತ್ತು. ಉಪಯೋಗ- ಜಾಸ್ತಿ ಭಾರ ಹೊತ್ತುಕೊಂಡು ತಿರುಗೊ ಹಾಗಿಲ್ಲ.ಶುಕ್ರವಾರ ರಾತ್ರಿ ಒಂಬತ್ತಕ್ಕೆ ಹೊರಡಬೇಕಾಗಿದ್ದವರು ಹತ್ತೂವರೆಗೆ ಮಲ್ಲೇಶ್ವರ ಬಿಟ್ವಿ. ಶಿವಮೊಗ್ಗದಲ್ಲಿ ಶಿವಣ್ಣನವರು ಹತ್ತಿದ್ದಾಗ ಬೆಳಗಿನ ಜಾವ ೫ ಗಂಟೆ. ಸಾಗರ, ಜೋಗ ದಾಟಿ ಗೇರುಸೊಪ್ಪ ಜಲಪಾತದ ಹತ್ತಿರ ಬಂದಾಗ ಏಳು ಗಂಟೆಯ ಮೇಲಾಗಿತ್ತು. ಗೇರುಸೊಪ್ಪ ಜಲಪಾತದಿಂದ ಧುಮುಕಿ ಮುಂದೆ ಹರಿಯುವ ನೀರಿನಲ್ಲಿ ನಮ್ಮ ನಿತ್ಯ ಕರ್ಮಗಳನ್ನ ಮುಗಿಸಿದೆವು. ಹೊನ್ನಾವರ ತಲುಪಿ ಕಾಮತ ಹೋಟೆಲಿನಲ್ಲಿ ಕೊಟ್ಟೆ ಕಡುಬು, ಬನ್ಸ್, ಶಿರ, ಮಸಾಲೆ ಮತ್ತು ಸೆಟ್ ದೋಸೆ ತಿಂದುಮುಗಿಸೋದರಲ್ಲಿ ಹತ್ತುಗಂಟೆಯಾಯಿತು. ಎಂಟು ಗಂಟೆಗೆಲ್ಲ ಹೊನ್ನಾವರದಲ್ಲಿ ಇದ್ದಿದ್ದರೆ ಬಿಸಿಲೇರುವುದರೊಳಗೆ ಸಾಕಷ್ಟು ದೂರ ನೆಡೆಯಬಹುದಿತ್ತು. ಹೊನ್ನಾವರದಿಂದ ಮುಂದೆ ಹಳದೀಪುರಕ್ಕೆ ಹೋಗಿ ಅಲ್ಲಿಂದ ನಮ್ಮ ಚಾರಣ ಆರಂಭಿಸಿದ್ವಿ.ಅತ್ಯುತ್ಸಾಹಿ ಹದಿಮೂರು ಜನರ ತಂಡ ಹಳದೀಪುರ ಬೀಚಿನ ಬಿಳೀ ಮರಳನ್ನ ನೋಡಿ ಪುಳಕಿತರಾಗಿ ಸರಿಯಾಗಿ ನೀರನ್ನೂ ತೆಗೆದು ಕೊಳ್ಳದೆ ಚಾರಣ ಆರಂಭಿಸಿತು. ನಾವು ಹೊರಟಾಗ ಗಂಟೆ ೧೦.೩೦. ಹಳದೀಪುರದಿಂದ ಸುಮಾರು ೧.೫ ಕಿ.ಮೀ. ನೆಡೆದ ಮೇಲೆ ನಮಗೆ ಮೊದಲ ಗುಡ್ಡ ಸಿಕ್ಕಿತು. ಕಲ್ಲು ಬಂಡೆಗಳಿಂದ ಕೂಡಿದ್ದ ಗುಡ್ಡವನ್ನು ಹತ್ತಿಳಿಯುವುದು ನಮಗೆಲ್ಲಾ ಒಂದು ಹೊಸ ರೀತಿಯ ಅನುಭವ. ನೀರಿನ ಹೊಡೆತಕ್ಕೆ ಬಂಡೆಗಳು ವಿಚಿತ್ರ ಆಕಾರಗಳನ್ನು ಪಡೆದಿದ್ದವು. ಇವು ಕೆಲವುಕಡೆಗಳಲ್ಲಿ ಜಾರುತ್ತಿದ್ದರೆ ಕೆಲವುಕಡೆ ಚೂಪಾಗಿದ್ದವು. ಈ ಗುಡ್ಡವನ್ನು ಇಳಿದರೆ ಎದುರಿಗೆ ಸುಂದರವಾಗಿದ್ದ ಒಂದು ಬೀಚ್, ಕಣ್ಣಳತೆಯ ದೂರದಲ್ಲಿ ಮತ್ತೊಂದು ಗುಡ್ಡ. ಎರಡು ಗುಡ್ಡಗಳ ಮಧ್ಯದಲ್ಲಿರುವ ಬೀಚ್, ಇದು ರಾಮನಗಿಂಡಿ ಬೀಚ್. ಇಲ್ಲಿ ಒಂದು ದೇವಸ್ತಾನನೂ ಇದೆ ಅಂತ ನಮ್ಮಮ್ಮ ಹೇಳಿದ್ರು. ಅಲ್ಲಿಗೆ ಹೋಗೊಕೆ ಆಗಲಿಲ್ಲ. ಸೂರ್ಯ ಮೇಲೆರುತ್ತಿದ್ದ, ನೀರಡಿಕೆಯಾಗುತ್ತಿತ್ತು, ಬಹಳ ಕಡಿಮೆ ನೀರು ತಂದು ತಪ್ಪು ಮಾಡಿದ್ವಿ. ಇದ್ದ ಕಿತ್ತಲೆ ಹಣ್ಣನ್ನ ತಿಂದು ಮುಗಿಸಿದೆವು. ರಾಮನಗಿಂಡಿ ಬೀಚಿನ ಎರಡನೇ ಗುಡ್ಡವನ್ನೂ ಹತ್ತಿ ಆಚೆತುದಿಯಲ್ಲಿ ಇಳಿದಾಗ ಸಿಗುವುದೇ ಧಾರೇಶ್ವರ. ಕಣ್ಣು ಹಾಯೋವಷ್ಟು ದೂರನೂ ಮರಳು, ಒಂದು ಬದಿಗೆ ಗುಡ್ಡ. ಧಾರೇಶ್ವರದ ಸಮುದ್ರ ದಂಡೆಯಲ್ಲಿ ಕೆಲವು ಮನೆಗಳಿವೆ, ಒಬ್ಬರ ಮನೆಯಲ್ಲಿ ಸಿಹಿ ನೀರಿನ ಭಾವಿ ಸಿಕ್ಕಿತು. ಅಲ್ಲಿ ಚೆನ್ನಾಗಿ ನೀರು ಕುಡಿದು ನಮ್ಮ ಬಾಟಲಿಗಳನ್ನು ತುಂಬಿಸಿಕೊಂಡು ಮುಂದೆ ಹೊರಟೆವು. ಸಮಯ ಮಧ್ಯಾನ್ಹ ೧೨.೪೫. ಇಲ್ಲಿಂದ ಮುಂದೆ ಕುಮಟ ಬೀಚಿನವರೆಗೆ ಮರಳದಂಡೆಯ ಮೇಲೆ, ಸಮುದ್ರದ ಪಕ್ಕದಲ್ಲೇ ನೆಡೆಯಬೇಕು, ಒಟ್ಟು ದೂರ ೬ ಕಿ.ಮೀ. ಸಮುದ್ರದ ದಂಡೆಯಲ್ಲಿ ನೆಡೆಯುವುದು ಸ್ವಲ್ಪ ವಿಚಿತ್ರ, ದೂರದಲ್ಲೆಲ್ಲೂ ಕೊನೆ ಇರುವಂತೆ ಕಂಡರೂ ಎಷ್ಟು ನೆಡೆದರೂ ಮುಗಿಯದ ದಾರಿಯಂತೆ ಅನ್ನಿಸುತ್ತದೆ. ಹಿತವಾಗಿ ಗಾಳಿ ಬೀಸುತ್ತಿದ್ದರಿಂದ ನೆಡೆಯುವುದು ಅಷ್ಟು ಆಯಾಸದಾಯಕವಾಗಿರಲಿಲ್ಲ. ಧಾರೇಶ್ವರದಿಂದ ಕುಮಟದವರೆಗೆ ಸಾಕಷ್ಟು ಹಕ್ಕಿಗಳನ್ನು ನೋಡಿದೆವು. ಕೆಲವು ಬೆಳ್ಳಗೆ ಹೊಳೆಯುತ್ತಿದ್ದರೆ ಕೆಲವು ಕಂದು ಮಿಶ್ರಿತ. ಕೆಲವು ಗುಬ್ಬಚ್ಚಿಯ ಹಾಗೆ ಸಣ್ಣಗಿದ್ದವು ಆದರೆ ಕಾಗೆಗಳಿಗಿಂತ ದಪ್ಪಗಿದ್ದ ಹಕ್ಕಿಗಳ ಗುಂಪು ಸಾಕಷ್ಟು ದೊಡ್ದದಿತ್ತು ಮತ್ತು ಬಹಳ ಚಾಣಾಕ್ಷವಾಗಿತ್ತು. ಈ ಹಕ್ಕಿಗಳು ಗುಂಪಿನ ಒಂದು ತುದಿಯಿಂದ ಇನ್ನೊಂದು ತುದಿಗೆ ಹಾರಿ ನಮ್ಮಿಂದ ಒಂದು ಸುರಕ್ಷಿತ ಅಂತರವನ್ನ ಕಾಪಾಡಿಕೊಳ್ಳುತ್ತಿದ್ದವು. ನಾವು ಒಂದು ಕಿಲೋ ಮೀಟರಿನಷ್ಟು ದೂರ ಇವುಗಳ ಜೊತೆಯಲ್ಲೇ ಬಂದಮೇಲೆ ಒಮ್ಮೆಲೆ ಹಿಂದಕ್ಕೆ ಹಾರಿ ಅವು ಮೊದಲಿದ್ದ ಜಾಗ ತಲುಪಿದವು. ನಾವು ಕುಮಟ ಬೀಚ್ ತಲುಪಿದಾಗ ೨.೧೫. ಕುಮಟ ಬೀಚಿನಲ್ಲಿ ಒಂದು ಸಣ್ಣ ಹಳ್ಳ ಸಮುದ್ರವನ್ನು ಸೇರುತ್ತದೆ, ಇದು ಅಘನಾಶಿನಿ ನದಿಯ ಒಂದು ಕವಲು ಎಂದು ಕೆಲವರು ಹೇಳಿದರು. ನಮ್ಮ ಟೆಂಪೋ ಟ್ರಾವೆಲ್ಲರ್ ಒಡೆಯ ಬಾಬುನನ್ನು ಅಲ್ಲಿಗೆ ಬರಲು ಹಳದಿಪುರ ಬಿಟ್ಟಾಗಲೇ ತಿಳಿಸಿದ್ದೆವು. ಅವನು ಕುಮಟ ಬೀಚ್ ತಲುಪಿ ಅಲ್ಲಿ ನೆಡೆಯುತ್ತಿದ್ದ ಶೂಟಿಂಗ್ ಬಗ್ಗೆ ನಮಗೆ ವರದಿ ಒಪ್ಪಿಸಿದ್ದ. ಅಲ್ಲಿ ಭಯ.com ಚಿತ್ರದ ಒಂದು ಹಾಡಿನ ಚಿತ್ರೀಕರಣ ನೆಡೆಯುತ್ತಿತ್ತು. ನಾವು ಅಲ್ಲಿಗೆ ತಲುಪುವ ಹೊತ್ತಿಗೆ ಸರಿಯಾಗಿ ಅವರು ಪ್ಯಾಕ್ ಅಪ್ ಹೇಳಿದರು. ಗಾಡಿ ಹತ್ತಿ ಕುಮಟ ಪಟ್ಟಣಕ್ಕೆ ಹೋಗಿ ಊಟಮಾಡಿದೆವು. ಊಟದ ನಂತರ ಮಜ್ಜಿಗೆ, ಎಳನೀರು ಮತ್ತು ಕಬ್ಬಿನಹಾಲು ಇವುಗಳಲ್ಲಿ ನಮಗೆ ಬೇಕಾದುದನ್ನು ಆಯ್ದುಕೊಂಡು ಕುಡಿದೆವು. ಬಾಬು ನಮ್ಮನ್ನು ವಾಪಸ್ ಕರೆದುಕೊಂಡು ಬಂದು ಕುಮಟ ಬೀಚಿನಲ್ಲಿ ಬಿಟ್ಟ. ಶೂಟಿಂಗ್ ಮತ್ತೆ ಶುರುವಾಗಿತ್ತು. ನಾವು ಕುಮಟ ಬೀಚ್ ಬಿಟ್ಟಾಗ ೪ ಗಂಟೆ. ಮೊದಲ ದಿನದ ಕೊನೆಗೆ ನಾವು ಬಾಡ ತಲುಪ ಬೇಕಿತ್ತು. ಕುಮಟ ಬೀಚಿನ ಕೊನೆಗೆ ಒಂದು ಗುಡ್ಡ ಇದೆ. ಈ ಬಾರಿ ಗುಡ್ಡವನ್ನು ಬಳಸಿಕೊಂಡು ಕಲ್ಲು ಬಂಡೆಗಳ ಮೇಲೆ ಹೋಗದೆ, ಗುಡ್ಡವನ್ನು ಹತ್ತಿ ಇಳಿದೆವು. ಅಷ್ಟೇನೂ ಕಡಿದಾಗಿರದೆ, ಜನರು ಓಡಾಡಿ ಕಾಲು ದಾರಿಗಳು ಇದ್ದಿದ್ದರಿಂದ ಸುಲಭವಾಗಿ ಈ ಗುಡ್ಡವನ್ನು ದಾಟಿದೆವು. ಗುಡ್ಡ ಇಳಿದ ಮೇಲೆ ಸಿಕ್ಕಿದ್ದು ವನ್ನಳ್ಳಿ ಬೀಚ್ ಮತ್ತು ವನ್ನಳ್ಳಿ ಗ್ರಾಮ. ಈ ಬೀಚ್ ಅರ್ದ ಚಂದ್ರಾಕ್ರುತಿಯಲ್ಲಿದ್ದು ಬಹಳ ಸುಂದರವಾಗಿದೆ. ಈ ಬೀಚಿನ ಇನ್ನೊಂದು ಕೊನೆಯಲ್ಲಿ ಮತ್ತೊಂದು ಗುಡ್ಡ ಇದೆ. ಅದನ್ನು ಹತ್ತಿ ಇಳಿದರೆ ಸಣ್ಣ ಬೀಚ್ -ಅದರ ಹೆಸರು ಮಂಗೊಡ್ಲು ಬೀಚ್- ಮತ್ತೊಂದು ಗುಡ್ಡ. ಈ ಗುಡ್ಡದ ಹೆಸರು ಕಡ್ಲೆ ಗುಡ್ಡ. ಕಡ್ಲೆ ಗುಡ್ಡವನ್ನು ಹತ್ತಿ ಇಳಿದರೆ ವಿಶಾಲವಾದ ಸಮುದ್ರ ದಂಡೆ. ಮಂಗೊಡ್ಲು ಬೀಚಿನಲ್ಲಿ ನಮಗೆ ಒಂದು ದೊಡ್ಡ ಮೀನಿನ ಮೂಳೆ ನೋಡಲು ಸಿಕ್ಕಿತು. ಅದು ತಿಮಿಂಗಿಲದ್ದೇ ಇರಬೇಕು ಅಷ್ಟು ದೊಡ್ಡ ಮೂಳೆ ಅದು. ಒಬ್ಬರು ಅದರ ಮೇಲೆ ಆರಾಮವಾಗಿ ಕೂರ ಬಹುದಿತ್ತು, ಅಷ್ಟು ದೊಡ್ಡ ಮೂಳೆ ಅದು.ಕಡ್ಲೆ ಗುಡ್ಡವನ್ನು ಇಳಿದ ಮೇಲೆ ಮುಂದೆ ಹೊನಲಗದ್ದೆ, ಗುಡೇ ಅಂಗಡಿ ಆಮೆಲೆ ಬಾಡ ಸಿಗುತ್ತದೆ. ಕಡ್ಲೆ ಗುಡ್ಡ ಇಳಿದ ಮೇಲೆ ಬಾಡ ತಲುಪಲು ಮೂರರಿಂದ ನಾಲ್ಕು ಕಿಲೋ ಮೀಟರ್ ನೆಡೆಯ ಬೇಕು. ಸಂಜೆ ತಂಪು ಹಿತವಾಗಿತ್ತು. ಸಮತಟ್ಟಾದ ದಂಡೆಯಲ್ಲಿ ಕ್ಯಾಚ್ ಕ್ಯಾಚ್ ಆಟ ಆಡುತ್ತ ಹೆಜ್ಜೆ ಹಾಕಿದೆವು. ಬಾಡ ತಲುಪಲು ಇನ್ನೂ ಒಂದು ಕಿಲೋ ಮೀಟರಿನಷ್ಟು ದೂರ ಇರುವಾಗಲೆ ಸೂರ್ಯ ಮುಳುಗತೊಡಗಿದ. ಎಲ್ಲರೂ ಮುಳುಗುವ ಸೂರ್ಯನೊಟ್ಟಿಗೆ ಫೋಟೋ ತೆಗೆಸಿಕೊಂಡೆವು. ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದರೆ ಪೂರ್ವದಿಂದ ಚಂದ್ರ ಮೇಲೆ ಬಂದಿದ್ದ. ಹುಣ್ಣಿಮೆಗೆ ಇನ್ನು ಎರಡು ದಿನಗಳಿದ್ದವು. ಸೂರ್ಯ ಮುಳುಗಿದರೂ ಸಾಕಷ್ಟು ಬೆಳಕಿತ್ತು. ಬಾಡ ತಲುಪಿ ಸ್ವಲ್ಪ ಹೊತ್ತು ಆಟ ಆಡುವುದರಲ್ಲಿ ಪೂರ್ತಿ ಕತ್ತಲಾಯಿತು. ಬಾಡದ ಸಮುದ್ರ ದಂಡೆಯಲ್ಲಿ ದೊಡ್ಡ ದೊಡ್ಡ ಬಂಡೆಗಳಿವೆ. ಎಲ್ಲರೂ ಒಂದೇ ಬಂಡೆ ಹತ್ತಿ ಕೂತೆವು. ಗಾಡಿಯೊಟ್ಟಿಗೆ ಬಾಬುಗೆ ಬಾಡಕ್ಕೆ ಬರಲು ಹೇಳಿದ್ದೆವು. ಆ ರಾತ್ರಿ ನಮಗೆ ಉಳಿಯಲು ಬಾಡದ ಶ್ರೀ ಪ್ರಮೋದ್ ಮಹಾಲೆಯವರು ತಮ್ಮ ಮನೆಯಲ್ಲಿ ವ್ಯವಸ್ತೆ ಮಾಡಿದ್ದರು. ಮಹಾಲೆಯವರು ನಮ್ಮ ತಂದೆಯವರ ಸ್ನೇಹಿತರು. ನಮ್ಮ ದೊಡ್ಡ ಗುಂಪು ಅವರ ಮನೆಯಲ್ಲಿ ಉಳಿಯುವುದು ಹೇಗೆಂದು ನಮಗೆ ಮುಜುಗರವಿತ್ತು. ಅವರ ಮನೆ ತಲುಪಿದಾಗ ೭.೩೦. ಸಿಹಿ ನೀರಿನಲ್ಲಿ ಕೈಕಾಲು ಮುಖ ತೊಳೆದು ಅವರು ಕೊಟ್ಟ ಶರಬತ್ತು ಕುಡಿದು ಅವರ ಮನೆಯ ಜಗುಲಿಯಲ್ಲಿ ಆಸಿನರಾದೆವು. ಮಹಾಲೆಯವರು ರಾತ್ರಿ ಭರ್ಜರಿ ಭೋಜನ ಮಾಡಿಸಿದ್ದರು. ಭೋಜನವಾದ ಮೇಲೆ ಬಾಳೆಹಣ್ಣು.ಇಲ್ಲಿಂದ ಬೆಳಗ್ಗೆ ಮುಂಚೆ ಸೂರ್ಯ ಹುಟ್ಟುವುದರೊಳಗೆ ಹೊರಟು ಬೆಳದಿಂಗಳಿನಲ್ಲಿ ಸ್ವಲ್ಪ ನೆಡೆದು ಚಂದ್ರ ಮುಳುಗುವುದನ್ನು ನೋಡಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಆದರೆ ದಣಿದಿದ್ದ ದೇಹಗಳು ಬೆಳಗ್ಗೆ ಬೇಗ ಏಳಲಿಲ್ಲ. ನಾವು ಮಹಾಲೆಯವರಿಗೆ ಬೀಳ್ಕೊಟ್ಟು ಹೊರಟಾಗ ಬೆಳಗ್ಗೆ ೬ ಗಂಟೆ ೩೦ ನಿಮಿಷಗಳಾಗಿದ್ದವು. ಅಪರಿಚಿತ ಹಳ್ಳಿಯಲ್ಲಿ ನಮ್ಮನ್ನು ಮನೆಯಲ್ಲಿ ಉಳಿಸಿ, ಒಳ್ಳೆಯ ಊಟ ಹಾಕಿಸಿ ಮಹಾಲೆಯವರು ಅದ್ಭುತವಾಗಿ ನೋಡಿಕೊಂಡರು. ಎರಡನೆಯ ದಿನ ಇಬ್ಬರು retired hurt ಆಗಿ ೧೩ ಜನರ ಗುಂಪು ೧೧ಕ್ಕೆ ಇಳಿದಿತ್ತು. ನಾವೆಲ್ಲರು ಜೇಷ್ಟಪುರದ ಸಮುದ್ರ ದಂಡೆ ತಲುಪುವುದರೊಳಗೆ ಸಂಪೂರ್ಣವಾಗಿ ಬೆಳಕಾಗಿತ್ತು. ವಾಲಿಬಾಲ್ ಆಡಿ, ಅದೇ ಬಾಲಿನಲ್ಲಿ ಫುಟ್ ಬಾಲ್ ಆಡುತ್ತ ಮುಂದೆ ಸಾಗಿದೆವು. ಮರಳಿನ ಮೇಲೆ ಓಡುತ್ತ beach jogging ಮಾಡಬೇಕೆನ್ನುವುದು ನನ್ನ ಮತ್ತು ಚಂದ್ರನ ಬಹಳ ದಿನಗಳ ಆಸೆ. ನಮ್ಮಿಬ್ಬರ beach joggingಗೆ ರಾಘವೇಂದ್ರನೂ ಸೇರಿಕೊಂಡ. ಅಘನಾಶಿನಿ ಗುಡ್ಡದವರೆಗೂ ಓಡಿ ನೆಡೆದು ಓಡಿದೆವು. ಅಘನಾಶಿನಿ ಗುಡ್ದದ ಮೇಲೆ ಕಿರಿ ಕೋಟೇಯಿದೆ. ಸಣ್ಣಗೆ ಕಾಂಪೌಂಡ್ ಎತ್ತರಕ್ಕೆ ಇರುವ ಕೋಟೆ ಗೋಡೆ ಬೆಟ್ಟದ ನೆತ್ತಿಯನ್ನು ಸುತ್ತಿಕೊಂಡು ಬರುತ್ತದೆ. ಅಘನಾಶಿನಿ ಬೆಟ್ಟದ ಮೇಲಿನಿಂದ ಅಘನಾಶಿನಿ ನದಿ ಸಮುದ್ರ ಸೇರುತ್ತಿರುವುದು ಕಾಣುತ್ತದೆ. ಇಲ್ಲಿ ನದಿ ಬಹಳ ವಿಶಾಲವಾಗಿ ಹರಿಯುತ್ತದೆ. ಒಂದು ದಂಡೆಯಿಂದ ಇನ್ನೊಂದು ದಂದೆಗೆ ದೋಣಿಯಲ್ಲಿ ಹೋಗಬೇಕು. ಬೆಟ್ಟವನ್ನು ಇಳಿದು ದೋಣಿಗಳಿದ್ದ ಜಾಗ ತಲುಪುವುದರೊಳಗೆ ಬೆಳಗಿನ ಹತ್ತು ಗಂಟೆಗಳ ಮೇಲಾಗಿತ್ತು. ದೋಣಿಯಲ್ಲಿ ನದಿ ದಾಟಲು ಬಹಳ ಜನರಿದ್ದರು ಮತ್ತು ನಮ್ಮ ತಂಡದವರೆಲ್ಲರಿನ್ನೂ ಬಂದಿರದ ಕಾರಣ ಸಣ್ಣದಾಗಿ ಒಂದು ಬೀಚ್ ವಾಲಿಬಾಲ್ ಆಡಿದೆವು. ಎಲ್ಲರೂ ಬಂದು ದೋಣಿ ಹಿಡಿದು ಆಚೆಯ ದಡದಲ್ಲಿದ್ದ ತದಡಿ ಎಂಬ ಬಂದರು ಹಳ್ಳಿ ತಲುಪಿ ಒಂದು ಹೋಟೆಲ್ ಹೊಕ್ಕೆವು. ಬನ್ಸ್, ಇಡ್ಲಿ ಮತ್ತು ಕಾಫಿ ಸೇವಿಸಿದೆವು. ಹೊಟೆಲಿನ್ನ ಎದುರಿಗೆ ಒಂದು ಗಣಪತಿ ದೇವಸ್ತಾನ, ಪಕ್ಕದಲ್ಲಿ ಒಂದು ಆಟದ ಮೈದಾನವಿತ್ತು. ಮೈದಾನದಲ್ಲಿ ವಾಲಿಬಾಲ್ ಕೋರ್ಟ್ ಇದ್ದು ನೆಟ್ ಸಹ ಕಟ್ಟಿತ್ತು. ವಾಲಿಬಾಲ್ ಕೋರ್ಟ್ ನೋಡಿದ್ದೇ ಒಂದು ಆಟ ಆಡಲು ಇಳಿದೆವು. ಬೀಚಿನಲ್ಲಿ ಡೈವ್ ಹೋಡೆದು ವಾಲಿಬಾಲ್ ಆಡುತ್ತಿದ್ದವರಾರೂ ಇಲ್ಲಿ ಡೈವ್ ಹೊಡೆಯುವ ಉಮೇದಿ ತೋರಿಸಲಿಲ್ಲ. ನಮ್ಮ ಆಟ ನೋಡಲು ತಕ್ಕ ಮಟ್ಟಿಗೆ ಸ್ತಳೀಯ ಪ್ರೇಕ್ಷಕರು ನೆರೆಯತೊಡಗಿದರು. ರಾಘವೇಂದ್ರ ಮತ್ತು ಹರೀಶರಿದ್ದ ತಂಡ ಸೋತಿತು. ಆಟ ಮುಗಿದ ಮೇಲೆ ತದಡಿಯ ಜನರಿಗೆ ವಿದಾಯ ಹೇಳಿ ಪ್ಯಾರಡೈಸ್ ಬೀಚಿನ ಕಡೆಗೆ ಹೊರಟೆವು.ತದಡಿಯಿಂದ ಮುಂದೆ ಬರುತ್ತಾ ಆಟದ ಬಗ್ಗೆ ವಿಶ್ಲೇಷಣೆ ಮಾಡುತ್ತಾ ಸೋಲನ್ನು ಯಾರಾದರೊಬ್ಬರ ತಲೆಗೆ ಕಟ್ಟಲು ಯತ್ನಿಸುತ್ತಿದ್ದರು. ರಾಘವೇಂದ್ರ ಮತ್ತು ಹರೀಶ ಸೋಲಿಗೆ ಪರಸ್ಪರರನ್ನು ದೂರಿದರೆ, ಇಬರೂ ಕಾರಣರೆನ್ನುವುದು ತಂಡದ ಸರ್ವಾನುಮತದ ತೀರ್ಮಾನವಾಗಿತ್ತು. ಆದರೆ ನಮ್ಮ ವಾಲಿಬಾಲ್ ಆಟದ ಫೋಟೋ ತೆಗಯದೆ ಜಾನಕಿರಾಮ ನಿಜವಾದ ಖಳನಾಯಕನಾಗಿದ್ದ.ತದಡಿಯಿಂದ ಹೊರಟು ಬೆಲೆಕಾನ್ ಬೀಚ್ ದಾಟಿ ಒಂದು ಗುಡ್ಡವನ್ನು ಹತ್ತಿ ಇಳಿದರೆ ಪ್ಯಾರಡೈಸ್ ಬೀಚ್ ಸಿಗುತ್ತದೆ. ಇಲ್ಲಿ ಮರಳಿನ ದಂಡೆ ಅಷ್ಟೇನು ದೊಡ್ಡದಿಲ್ಲ ಆದರೆ ಬಹಳ ಸಂಖ್ಯೆಯಲ್ಲಿ ಚೂಪಾದ ಬಂಡೆಗಳಿದ್ದು ನೋಡಲು ತುಂಬಾ ಸುಂದರವಾಗಿದೆ. ಇಲ್ಲಿಂದ ಮುಂದೆ half moon beach ಇದೆ. ಪ್ಯಾರಡೈಸ್ ಬೀಚಿನಿಂದ ಹಾಲ್ಫ್ ಮೂನ್ ಬೀಚಿಗೆ ಬಂಡೆಗಳ ಮೇಲೆ ಹತ್ತಿ ಹೋಗಲು ಆಗುವುದಿಲ್ಲ. ಗುಡ್ಡವನ್ನು ಹತ್ತಿ ಹೋಗಬೇಕು. ಹಾಲ್ಫ್ ಮೂನ್ ಬೀಚಿನಲ್ಲಿ ಸಹ ಮರಳ ದಂಡೆ ಸಣ್ಣದೆ. ಆದರೆ ನೋಡಲು ಬಹಳ ಚೆನ್ನಾಗಿದೆ. ತದಡಿಯಿಂದ ಪ್ಯಾರಡೈಸ್ ಬೀಚ್ ತಲುಪಲು ೩೦ ರಿಂದ ೪೦ ನಿಮಿಷಗಳು ಬೇಕು. ಪ್ಯಾರಡೈಸ್ ಬೀಚಿನಿಂದ ಹಾಲ್ಫ್ ಮೂನ್ ಬೀಚ್ ತಲುಪಲು ಸುಮಾರು ೧೫ ನಿಮಿಷಗಳು ಸಾಕು. ಈ ಎರಡೂ ಬೀಚುಗಳಿಗೆ ಕಾಲ್ನೆಡಿಗೆಯಲ್ಲಿ ಬರದೆ ಬೇರೆ ದಾರಿಯಿಲ್ಲ. ಬಹುಷಃ ಇದೇ ಕಾರಣದಿಂದಲೇ ಈ ಎರಡೂ ಬೀಚುಗಳಿಗೆ ಹೆಚ್ಚು ಜನರು ಬರದೆ ಬಹಳ ಶುಭ್ರವಾಗಿವೆ. ಈ ಎರಡೂ ಬೀಚುಗಳಲ್ಲಿ ವಿದೇಶೀ ಪ್ರವಾಸಿಗರು ತುಂಬಿದ್ದರು. ದೇಶೀಯರು ಇಲ್ಲಿ ಅಂಗಡಿಗಳನ್ನೂ ಹೋಟೆಲ್ಲುಗಳನ್ನು ನೆಡೆಸುತ್ತಾರೆ. ಆದರೆ ಅವರಿಗೆ ದೇಶೀ ಗ್ರಾಹಕರ ಕಡೆಗೆ ಒಲವಿಲ್ಲ. ಓಂ ಬೀಚಿನಲ್ಲಿಯೂ ಇದೇ ಕತೆ. ಇತ್ತೀಚಿಗೆ ಓಂ ಬೀಚಿನವರೆಗೂ ಟಾರ್ ರಸ್ತೆ ಮಾಡಿರುವುದರಿಂದ ಓಂ ಬೀಚಿನಲ್ಲಿ ವಿದೇಶಿಯರನ್ನಷ್ಟೇ ಅಲ್ಲದೇ ದೇಶಿಯರನ್ನೂ ಕಾಣಬಹುದಿತ್ತು. ಓಂ ಬೀಚಿನಲ್ಲಿ ದೇಶಿಯರ ಒಂದು ಗುಂಪು ಸುಮಾರು ೨-೩ ಗಂಟೆಗಳಕಾಲ ಕೂತು ಸಮಾರಾಧನೆ ನೆಡೆಸಿ ಸಾಕಷ್ಟು ಪ್ಲಾಸ್ಟಿಕ್ ಕಸ ಎಸೆದು ಹೋಯಿತು. ಪಕ್ಕದಲ್ಲೇ ಇದ್ದ ತೊಟ್ಟಿಯ ಮೇಲೆ 'ಗ್ರಾಮ ಪಂಚಾಯಿತಿ ಗೋಕರ್ಣ, ನನ್ನನ್ನು ಉಪಯೋಗಿಸಿ' ಎಂದಿದ್ದದ್ದು ಅವರಿಗೆ ಕಾಣಿಸಲೇ ಇಲ್ಲ. ಇದು ಬೀಚುಗಳದಷ್ಟೇ ಕತೆಯಲ್ಲ. ಮುಂಗಾರು ಮಳೆ ಚಿತ್ರದ ನಂತರದ ಜೋಗವನ್ನು ನೋಡಿ ನಾನು ನಡುಗಿ ಹೋಗಿದ್ದೆ. ಗಾಳಿಪಟದ ನಂತರ ಕೊಡಚಾದ್ರಿ ಹಾಗಾಗದಿರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ.ಹಾಲ್ಫ್ ಮೂನ್ ಬೀಚಿನಿಂದ ಓಂ ಬೀಚಿಗೆ ೨೦ ನಿಮಿಷಗಳ ಹಾದಿ. ಒಂದು ಗುಡ್ಡವನ್ನು ಹತ್ತಿ ಇಳಿಯಬೇಕು. ಗುಡ್ಡದ ಮೇಲಿನಿಂದ ಒಂದು ಬದಿಗೆ ಕಾಣುವ ಸಮುದ್ರ, ಕೆಳಗಿನ ಬಂಡೆಗಳಿಗೆ ಬಂದು ಅಪ್ಪಳಿಸುವ ಅಲೆಗಳು, ಅವುಗಳನ್ನು ನೋಡುತ್ತಾ ದಿನವೆಲ್ಲಾ ಅಲ್ಲಿ ಕೂರಬಹುದು. ಈ ಗುಡ್ಡ ಇಳಿಮುಖವಾದಾಗ ಓಂ ಬೀಚ್ ಕಾಣುತ್ತದೆ. ಗುಡ್ಡದ ಮೇಲಿನಿಂದ ಸಮುದ್ರ ದಂಡೆ '3'ರ ಆಕಾರದಲ್ಲಿ ಕಾಣುತ್ತದೆ. ಇಲ್ಲಿ ಸಮುದ್ರ ಸಮತಟ್ಟಾಗಿದ್ದು ವಿಷಾಲವಾಗಿ ಹರಡಿಕೊಂಡಿದೆ. ನೀರು ತಿಳಿಯಾಗಿದೆ. ಅಲೆಗಳ ಹೊಡೆತ ಜೋರಾಗಿಲ್ಲ.ನಾವು ಓಂ ಬೀಚ್ ತಲುಪಿದಾಗ ೩ ಗಂಟೆಗಳ ಮೇಲಾಗಿತ್ತು. ಬ್ಯಾಗುಗಳನ್ನು ಕಳಚಿ ಎಲ್ಲರೂ ನೀರಿಗೆ ಇಳಿದೆವು. ದಣಿದ ದೇಹಗಳಿಗೆ ನೀರು ಅಹ್ಲಾದಕರವಾಗಿತ್ತು. ಕರಿ ಮತ್ತು ಗುರು ಇಬ್ಬರನ್ನು ಹೊರತು ಪಡಿಸಿದರೆ ಈ ಎರಡು ದಿನದಲ್ಲಿ ಉಳಿದವರಾರೂ ಸಮುದ್ರಕ್ಕೆ ಇಳಿದಿರಲಿಲ್ಲ. ಕರಿ ಮಾತ್ರ ಮೊದಲ ದಿನದಿಂದಲೇ ಸಿಕ್ಕ ಸಿಕ್ಕ ಬೀಚಿನಲ್ಲೆಲ್ಲಾ ನೀರಿಗೆ ಬಿದ್ದು ಬಂದಿದ್ದ. ಒಂದು ಗಂಟೆಗೂ ಹೆಚ್ಚು ಹೊತ್ತು ನೀರಿನಲ್ಲಿ ಆಡಿ ಸಂತುಷ್ಟರಾದಮೇಲೆ ಗೋಕರ್ಣಕ್ಕೆ ಹೊರಟೆವು.ಓಂ ಬೀಚಿನಿಂದ ಮುಂದೆ ಗುಡ್ಡವೊಂದನ್ನು ಹತ್ತಿಳಿದರೆ ಕುಡ್ಲೆ ಬೀಚ್ ಸಿಗುತ್ತದೆ. ಅಲ್ಲಿಂದ ಮುಂದೆ ಇನ್ನೊಂದು ಗುಡ್ಡ ಹತ್ತಿಳಿದರೆ ಗೋಕರ್ಣ. ನಾವುಗಳು ಓಂ ಬೀಚಿನಿಂದ ಕಾಲ್ನೆಡಿಗೆಯಲ್ಲಿ ಹೋಗದೆ ಗಾಡಿ ಹತ್ತಿ ಗೋಕರ್ಣ ತಲುಪಿದೆವು. ಗೋಕರ್ಣದಲ್ಲಿ ಸ್ನಾನ ಮುಗಿಸಿ ದೇವರ ದರ್ಶನ ಮಾಡಿದೆವು. ಗೋಕರ್ಣದಿಂದ ಹೊರಟು ಕುಮಟದಲ್ಲಿ ರಾತ್ರಿ ಊಟಮಾಡಿ ಬೆಂಗಳೂರಿನೆಡೆಗೆ ಹೊರಟೆವು. ಗಾಡಿಯಲ್ಲಿ ಹರಟೆ ರಾತ್ರಿ ಬಹಳ ಹೊತ್ತಿನವರೆಗೆ ನೆಡೆದಿತ್ತು. ಒಟ್ಟಿನಲ್ಲಿ ಒಂದು ಅಹ್ಲಾದಕರವಾದ ಮತ್ತು ವಿಭಿನ್ನವಾದ ಚಾರಣಮುಗಿಸಿ ಸಂತೋಷದಿಂದ ಹಿಂದಿರುಗಿದೆವು.ಕಾರ್ತಿಕ್ ಕಳಿಸಿದ್ದ ವರದಿಯಲ್ಲಿ ಒಂದು ಬೀಚಿನಿಂದ ಇನ್ನೊಂದು ಬೀಚಿನ ನಡುವಿನ ದೂರವನ್ನು ಕಿಲೋ ಮೀಟರುಗಳಲ್ಲಿ ತಿಳಿಸಿತ್ತು. ನಮಗಿದು ಉಪಯೋಗಕ್ಕೆ ಬಂತು. ಹೆಚ್ಚಿನ ಉಪಯೋಗಕ್ಕೆ ಬಂದಿದ್ದು 'wikimapia.org'ನಿಂದ ತೆಗೆದುಕೊಂಡು ಹೋಗಿದ್ದ ಚಿತ್ರಗಳು. ನನಗೆ ಕೊನೇ ಘಳಿಗೆಯಲ್ಲಿ ಈ ಚಿತ್ರಗಳ ಪ್ರಿಂಟ್ ತರಲು ಹೇಳಿದ್ದ ಜಾನಕಿರಾಮನಿಗೆ ಶಹಭಾಸ್ ಹೇಳೋಣ.
Posted by ಹರಟೆ ಮಲ್ಲ at 10:25 AM 9 comments Links to this post
Labels:
Friday, 1 February, 2008

ಗೀತೆ-ಗಾಯನ
ಇದು ನಾನು ಬರೆದಿರುವ ಅತೀ ಸಣ್ಣಕತೆ.ಹರೀಶ ಕವನ ಬರೆದ. "ಅಲೆಗಳ ತೀರದಲ್ಲಿ ಏನೀ ನಿನ್ನ ಮೌನ?".ಉತ್ತರ ಭಾರತದ ಗಾಯಕ ಹಾಡಿದ. "ಹಲೆಗಳ ತೀರದಲಿ ಏನೀ ನಿಮ್ಮೌನ?"
Posted by ಹರಟೆ ಮಲ್ಲ at 9:25 AM 0 comments Links to this post
Labels:
Older Posts
Subscribe to: Posts (Atom)
window.google_render_ad();
ನನ್ನ ಬಗ್ಗೆ, ನನ್ನಿಂದಲೆ...
Shivananda.P Magod(Honnavara)
ಬೆಂಗಳೂರು, ಕರ್ನಾಟಕ, India
ಹಣೆಪಟ್ಟಿಗಳು
ಕೈಮರ (4)
ಚಾರಣ (8)
ಸಣ್ಣ ಕತೆ (3)
ಸುಲಲಿತ ಪ್ರಭಂದ (3)

ಇಲ್ಲಿಯವರೆಗೆ
2008 (5)
December (1)
ಮುಕ್ತಿ ಹೊಳೆ
April (1)
ಕುಂಟಿನಿ pages
February (2)
Beach Trek
ಗೀತೆ-ಗಾಯನ
January (1)
ಚಿಕ್ಕ ಊರಿಗೆ ಹೊರಟ
2007 (13)
November (2)
2007 ಕರ್ನಾಟಕದ ರಾಜಕೀಯ
ಕೊಡಚಾದ್ರಿ -6
October (1)
ಕೊಡಚಾದ್ರಿ -5
September (1)
ಕೊಡಚಾದ್ರಿ -4
August (3)
ಕೊಡಚಾದ್ರಿ-3
ಕೊಡಚಾದ್ರಿ -2
ಕೊಡಚಾದ್ರಿ -1
July (6)
ಇಣುಕಿ ನೋಡೋಣ
ಬಾಗಿಲಿಂದಾಚೆ...
ಚಿಕ್ಕವನು
ಚದುರಂಗ... ಇಲ್ಲ ರಣರಂಗ?
ಮದುವೆ... ವಾದ್ಯ...
ಬರೀಯೊಣು ಬಾರ

No comments: